ಗ್ರಾಮ ನೈರ್ಮಲ್ಯ ಶಿಲ್ಪ -
ಗ್ರಾಮಗಳಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಹಿತ ದೃಷ್ಟಿಯಿಂದ ನೈರ್ಮಲ್ಯವನ್ನು ಕಾಪಾಡಿಕೊಂಡು ಬರುಲು ಅನುಸರಿಸುವ ತಂತ್ರಗಳು (ರೂರಲ್ ಸ್ಯಾನಿಟೇಷನ್ ಎಂಜಿನಿಯರಿಂಗ್), ನಗರಗಳಲ್ಲಿ ಸುಯೋಜಿತ ಹಾಗೂ ಸುರಕ್ಷಿತ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ (ನೋಡಿ- ಕಚರಾ-ವಿಲೇವಾರಿ), ಕಸದ ವಿಲೇವಾರಿ (ನೋಡಿ- ಕಸದ-ವಿಲೇವಾರಿ), ನಗರಸಭೆ ಮುಂತಾದವು ಇರುವುದರಿಂದ ಅಲ್ಲಿನ ನೈರ್ಮಲ್ಯ ಶಿಲ್ಪದ ಹರವು ಬೇರೆಯೆ ಉಂಟು (ನೋಡಿ- ನಗರ-ನೈರ್ಮಲ್ಯ-ಶಿಲ್ಪ).

ನೀರು : ಜೀವನದ ಮೂರು ಪ್ರಮುಖ ಆವಶ್ಯಕತೆಗಳು ನೀರು, ಆಹಾರ, ವಾಯು. ಆಹಾರದ ಉತ್ಪಾದನೆಗಾದರೂ ನೀರು ಬಲು ಅಗತ್ಯ. ಆದ್ದರಿಂದಲೇ ಪ್ರಾಚೀನ ಮಾನವ ಬಲು ಸುಲಭವಾಗಿ ನೀರು ದೊರೆವ ತಾಣಗಳಲ್ಲೇ ತನ್ನ ನೆಲೆಗಳನ್ನು ಕಟ್ಟಿಕೊಂಡ. ಕುಡಿವ ನೀರಿನ ಆಕರವಾದ ಹೊಳೆಯೋ ಕೆರೆಯೋ ಕಚರಾ ನೀರನ್ನು ಪಡೆಯುವ ತೊಟ್ಟಿಯೂ ಆಯಿತು. ಈ ಅನಿರ್ಮಲ ಪ್ರವೃತ್ತಿ ಮನುಷ್ಯನ ಬೆನ್ನನ್ನು ಬಿಡಲೇ ಇಲ್ಲ. ಜನಸಂಖ್ಯೆ ಬೆಳೆದು ಒಳನಾಡಿಗೆ ಮನುಷ್ಯ ಸಾಗಿ ಹಳ್ಳಿಗಳೂ ಕೇರಿಗಳೂ ಬೆಳೆದಂತೆ ನೀರಿನ ನೈರ್ಮಲ್ಯದ ವಿಚಾರ ರೂಢ ಮೂಲವಾಗಿದ್ದ ಅಸಡ್ಡೆಯ ಪ್ರವೃತ್ತಿ ಮನುಷ್ಯನಿಗೆ ಕಾಯಿಲೆ ಮತ್ತು ಅಪಮೃತ್ಯು ತರುವ ಪಿಡುಗೇ ಆಯಿತು. ಆದ್ದರಿಂದ ಗ್ರಾಮ ನೈರ್ಮಲ್ಯ ಶಿಲ್ಪದಲ್ಲಿ ಪ್ರಥಮಸ್ಥಾನ ನೀರಿನ ವೈe್ಞÁನಿಕ ಉಪಯೋಗ ಮತ್ತು ವಿಲೇವಾರಿಗೆ ಸಲ್ಲುತ್ತದೆ. 

ಗ್ರಾಮಸ್ಥರಿಗೆ ನೀರಿನ ಪೂರೈಕೆ ಆಗುವುದು ಬಾವಿ, ಕೆರೆ ಇಲ್ಲವೇ ಗ್ರಾಮದ ನೆರೆಯಲ್ಲೇ ಹರಿಯುವ ತೋಡು ಹೊಳೆಗಳಿಂದ. ಇವುಗಳ ಪರಿಸರ ಸದಾ ಶುಚಿಯಾಗುವಂತೆ ಕಾಪಾಡುವುದು ಪ್ರತಿಯೊಬ್ಬ ಗ್ರಾಮವಾಸಿಯ ಕರ್ತವ್ಯ. ಈ ದಿಶೆಯಲ್ಲಿ ಮುಂದಿನ ಕೆಲವ ಸಂಗತಿಗಳನ್ನು ಪ್ರತಿಯೊಬ್ಬ ಗ್ರಾಮನಿವಾಸಿಯೂ ಅರಿತಿರಬೇಕು. 

1 ಇರುವ ನೀರಿನ ಮೊತ್ತವನ್ನು ಅನುಸರಿಸಿ ಅದರ ಉಪಯೋಗ ನಿಯಂತ್ರಿತವಾಗಬೇಕು. ನೀರಿನ ದುರುಪಯೋಗವನ್ನು ಸಾದ್ಯವಾದಷ್ಟು ತಡೆಗಟ್ಟಬೇಕು. 
2 ನೀರ್ದಾಣದ ಆಸುಪಾಸುಗಳನ್ನು ಶುಚಿಯಾಗಿಡಬೇಕು. ಅಂದರೆ ತಾಣದ ಹತ್ತಿರ ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಶೌಚಕಾರ್ಯ ಮುಂತಾದವು ಕೂಡದು.
3 ಕುಡಿಯುವ ನೀರನ್ನು ಜಾನುವಾರು ತೊಳೆಯಲು ಉಪಯೋಗಿಸಬಾರದು. ಹಾಗೆ ಉಪಯೋಗಿಸಿದರೂ ತಾಣದಿಂದ ಬಲು ದೂರದಲ್ಲಿ ತೊಳೆಯಬೇಕು. ಉಪಯೋಗಿಸಿದ ನೀರು ಕುಡಿವ ನೀರಿನ ತಾಣವನ್ನು ಸೇರದಂತೆ ಎಚ್ಚರವಹಿಸಬೇಕು. 

4 ನದಿಯ ನೀರನ್ನು ಕುಡಿಯಲು ಉಪಯೋಗಿಸಿದರೆ ನದೀಪಾತ್ರದ ಮೇಲ್ದಂಡೆಯಲ್ಲಿ ಯಾವುದೇ ಶೌಚಕಾರ್ಯ ನಡೆಸಲೇಕೂಡದು. ಕೆಳದಂಡೆಯ ನೀರನ್ನು ಇದಕ್ಕೆ ಉಪಯೋಗಿಸಬಹುದು.

5 ಅಂಟುಜಾಡ್ಯದ ಬೆದರಿಕೆ ಇರುವ ಕಡೆ ಕುಡಿಯುವ ನೀರಿನಲ್ಲಿರುವ ರೋಗಾಣುಗಳನ್ನು ನಾಶಮಾಡಲು ಪೊಟ್ಯಾಸಿಯಮ್ ಪರಮ್ಯಾಂಗನೇಟ್ ಅಥವಾ ಬ್ಲೀಚಿಂಗ್ ಪೌಡರನ್ನು (ಚಲುವೆ ಪುಡಿ) ಉಪಯೋಗಿಸಬೇಕು. 
6 ವಾಸ ಮಾಡುವ ಮನೆಗಳನ್ನು ಕುಡಿಯುವ ನೀರಿನ ತಾಣದ ಹತ್ತಿರ ಕಟ್ಟಬಾರದು. ಮನೆಗಳಿಂದ ಹರಿದು ಹೋಗುವ ಕೊಳಕುನೀರು ಮಣ್ಣಿನೊಳಗಿಂದ ಇಂಗಿ ಕುಡಿಯುವ ನೀರಿನೊಡನೆ ಬೆರೆತು ಅದನ್ನು ಕೊಳಕು ಮಾಡುತ್ತದೆ. 

7 ಬಾವಿ ತೋಡುವಾಗ ಶುದ್ಧವಾದ ನೀರು ಎಲ್ಲಿ ಅತಿ ಕಡಿಮೆ ಆಳದಲ್ಲಿ ಸಿಕ್ಕುತ್ತದೆ ಎಂಬುದನ್ನು ಪತ್ತೆಮಾಡಬೇಕು. ಸಾಧಾರಣವಾಗಿ ನೀರಿನ ಖರ್ಚು ಪಟ್ಟಣಗಳಿಗಿಂತ ಹಳ್ಳಿಗಳಲ್ಲಿ ಕಡಿಮೆ. ಕೊಳೆಯನ್ನು ಸಾಗಿಸಲು ನೀರಿನ ಮಾಧ್ಯಮವನ್ನು ಉಪಯೋಗಿಸಿದಾಗ ಮಾತ್ರ ಹಳ್ಳಿಯಲ್ಲಿ ನೀರಿನ ಖರ್ಚು ಸ್ವಲ್ಪ ಜಾಸ್ತಿ ಆಗುತ್ತದೆ. ಗ್ರಾಮದ ಹವೆ, ಸಾಮಾಜಿಕ ಚಟುವಟಿಕೆಗಳು ಹಾಗೂ ಜೀವನ ಕ್ರಮ ನೀರಿನ ಉಪಯೋಗದ ಮಟ್ಟವನ್ನು ನಿರ್ಧರಿಸುತ್ತವೆ. 

ಭಾರತದಲ್ಲಿ 80% ಗ್ರಾಮಗಳು ಕುಡಿಯುವ ನೀರಿಗಾಗಿ ಬಾವಿಯನ್ನೇ ಅವಲಂಬಿಸಿವೆ. ಆದ್ದರಿಂದ ಬಾವಿಗಳ ರಕ್ಷಣೆ ಶುದ್ಧ ನೀರನ್ನು ಪಡೆಯುವ ದಿಶೆಯಲ್ಲಿ ಅನಿವಾರ್ಯವಾದ ಹೆಜ್ಜೆ. 
ಸಾಧಾರಣ ಬಾವಿ : ಇದರ ವ್ಯಾಸ ಸಾಧಾರಣವಾಗಿ 2.4-7.2 ಮೀ ನಷ್ಟು, ಆಳ ಸಾಧಾರಣವಾಗಿ ನೆಲದಲ್ಲಿ ನೀರು ಸಿಕ್ಕುವ ಮಟ್ಟದ ವರೆಗೆ.

ಒತ್ತಡದ ಬಾವಿ ಅಥವಾ ಆಳದ ಬಾವಿ: ಇದರಲ್ಲಿ ನೆಲದೊಳಗಿರುವ ಅಭೇದ್ಯವಾದ ಬಂಡೆಕಲ್ಲುಗಳ ಅಡಿಯಲ್ಲಿರುವ ನೀರನ್ನು ನೆಲದ ಮೇಲಕ್ಕೆ ಬರುವಂತೆ ಮಾಡಲಾಗುವುದು. ನೆಲದ ಅಡಿಯಲ್ಲಿನ ಒತ್ತಡ ಹೊರಗಿನ ವಾತಾವರಣದ ಒತ್ತಡಕ್ಕಿಂತ ಜಾಸ್ತಿ. ಬಾವಿಯನ್ನು ಈ ಆಳದ ವರೆಗೆ ತೋಡಿಸಿದರೆ ನೀರು ತನ್ನಷ್ಟಕ್ಕೆ ಮೇಲೆ ಬರುವುದು. ಇಂಥ ಬಾವಿಯ ವ್ಯಾಸ 15-16 ಸೆಂ. ಮೀ.ನಷ್ಟು. ನೀರನ್ನು ಇಂಥ ಬಾವಿಗಳಿಂದ ಕೊಳವೆಗಳ ಮೂಲಕವೂ ಮೇಲೆತ್ತಬಹುದು. 

ಒಳಕ್ಕೆ ಸೇರಿಸಿಕೊಂಡು ಹೋಗುವ ಬಾವಿ : ನದಿಯ ದಡದ ಮರಳಿನಲ್ಲಿ ಕೆಲವು ಬಾವಿಗಳನ್ನು ತೋಡಿ ಅವನ್ನೆಲ್ಲ ನಳಿಗೆಗಳ ಮೂಲಕ ಒಂದು ಮುಖ್ಯ ಬಾವಿಗೆ ಹಾಯಿಸಬೇಕು. ಅಲ್ಲಿಂದ ಪೂರಕ ಯಂತ್ರಗಳ ಮೂಲಕ ಮೇಲಕ್ಕೆ ಹಾಯಿಸಿ ಶುದ್ಧೀಕರಿಸಿ ಕುಡಿಯುವುದಕ್ಕೆ ಉಪಯೋಗಿಸಬಹುದು. ಬಾವಿಯ ನೀರನ್ನು ಪೂರಕ ಯಂತ್ರಗಳಿಂದ ಸುಲಭವಾಗಿ ಕಡಿಮೆ ಶ್ರಮದಿಂದ ಎತ್ತಬಹುದು. ಈ ಬಾವಿಗಳ ಮೇಲ್ಭಾಗವನ್ನು ಕಾಂಕ್ರೀಟ್ ಅಥವಾ ಇನ್ನಾವುದಾದರೂ ಹಲಗೆಗಳಿಂದ ಮುಚ್ಚಬೇಕು. 

ಗ್ರಾಮಕಸದ ವಿಲೇವಾರಿ : ಗ್ರಾಮಗಳಲ್ಲಿ ಪ್ರತಿಯೊಂದು ಮನೆಯಿಂದ ಬರುವ ಕೊಳಕು ನೀರು, ಮಳೆ ನೀರು ಮುಂತಾದವನ್ನು ಮನೆಯ ಹಿಂದಿನ ತೋಟಕ್ಕೆ ಹಾಯಿಸಬೇಕು. ಇಲ್ಲವೇ ಎಲ್ಲ ಮನೆಗಳ ನೀರನ್ನು ಚರಂಡಿಗಳಿಗೆ ಹಾಯಿಸಿ ಸೂಕ್ತವಾಗಿ ವಿಲೇವಾರಿ ಮಾಡಬೇಕು. ಯಾವ ಕಾರಣಕ್ಕೂ ಹರಿವ ನೀರಿಗಾಗಲೀ ಕೆರೆ ಕುಂಟೆಗಳಿಗಾಗಲೀ ಈ ನೀರನ್ನು ಬಿಡತಕ್ಕದ್ದಲ್ಲ. ಗ್ರಾಮಕಸವನ್ನು ವ್ಯವಸಾಯಕ್ಕೆ ಬಳಕೆ ಮಾಡುವುದು ಸರ್ವೋತ್ಕøಷ್ಟ. ಜಾನವಾರುಗಳ ವಿಸರ್ಜನೆಗಳನ್ನು ಕೂಡ ಇದೇ ರೀತಿ ಬಳಸಬೇಕು. 

ಕಕ್ಕಸುಗಳ ನಿರ್ಮಾಣ: ಗ್ರಾಮಗಳಲ್ಲಿ ನೀರಿನ ಸರಬರಾಜು ವ್ಯವಸ್ಥಿತವಾಗಿ ಇರುವುದಿಲ್ಲ; ಅಲ್ಲದೇ ಒಳಚರಂಡಿ ಏರ್ಪಾಡು ಕೂಡ ಇರುವುದು ಅಪರೂಪ. ಆದ್ದರಿಂದ ಪ್ರತಿಯೊಂದು ಮನೆಗೂ ಮಲಮೂತ್ರಗಳ ವಿಲೇವಾರಿಗೆ ಬೇರೆ ಬೇರೆ ಏರ್ಪಾಡಿರುವುದು. ಕೆಲವನ್ನು ಇಲ್ಲಿ ವಿವರಿಸಿದೆ. 

ಗುಂಡಿ ಕಕ್ಕಸುಗಳು : ಇವು ಸಾಧಾರಣವಾಗಿ ನೆಲದಲ್ಲೇ ತೋಡಿದ ಗುಂಡಿಗಳು. 1.5-1.8 ಮೀಟರ್ ಆಳ ಮತ್ತು ಸುಮಾರು 1.65 ಚ.ಮೀ. ಸಲೆ ಇರುವ ಇಂಥ ಒಂದು ಗುಂಡಿಯನ್ನು ಕಲ್ಲಿನಿಂದ ಅಥವಾ ಇಟ್ಟಿಗೆಯಿಂದ ಮೇಲ್ಗಡೆ ಮುಚ್ಚಿ ಉಪಯೋಗಿಸಲು ಒಂದು ರಂಧ್ರವನ್ನು ಬಿಡಲಾಗುವುದು. ಗುಂಡಿಯೊಳಗೆ ಉತ್ಪನ್ನವಾಗುವ ಅನಿಲಗಳನ್ನು ಹೊರಹಾಕಲು ಒಂದು ನಳಿಗೆಯ್ನನು ಗುಂಡಿಗೆ ಜೋಡಿಸಲಾಗುವುದು. ಉಪಯೋಗಿಸಿದ ಮೇಲೆ ಪ್ರತಿಸಲವೂ ಒಂದು ಹಿಡಿ ಒಣ ಮಣ್ಣನ್ನು ಮಲದ ಮೇಲೆ ಹಾಕಬೇಕು. ಸಾಧ್ಯವಾದಷ್ಟು ಮಟ್ಟಿಗೆ ನೀರು ಗುಂಡಿಯನ್ನು ಸೇರದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಮಲ ರಾಸಾಯನಿಕ ಕ್ರಿಯೆಗೆ ಒಳಗಾಗಿ ಕೆಟ್ಟವಾಸನೆ ಬರಲು ಪ್ರಾರಂಭವಾಗುತ್ತದೆ. ಗುಂಡಿ ಪೂರ್ತಿ ತುಂಬಿದ ಬಳಿಕ ಮೇಲ್ಗಡೆ ಒಣಮಣ್ಣು ಹಾಕಿ ಮುಚ್ಚಬೇಕು. ಆ ಬಳಿಕ ಆ ಗುಂಡಿಯನ್ನು ಉಪಯೋಗಿಸಬಾರದು. ಮುಂದಿನ ಕೆಲವು ತಿಂಗಳುಗಳಲ್ಲೇ ಮಲ ರಾಸಾಯನಿಕ ಕ್ರಿಯೆಗೆ ಒಳಗಾಗಿ ಒಳ್ಳೆಯ ಗೊಬ್ಬರವಾಗಿ ಪರಿವರ್ತನೆಗೊಳ್ಳುವುದು. ಆಗ ಇದನ್ನು ಹೊರತೆಗೆದು ತೋಟಕ್ಕೆ ಉಪಯೋಗಿಸಬಹುದು. 

ಆಳದ ಗುಂಡಿಯ ಕಕ್ಕಸು : ಈ ಮೇಲಿದನ್ನೇ ಸ್ವಲ್ಪ ಪರಿಷ್ಕರಿಸಿ ಇನ್ನೂ ಆಳವಾದ ಗುಂಡಿಯನ್ನು ತೋಡುವುದರಿಂದ ಪ್ರತಿಸಲ ಉಪಯೋಗಿಸಿದಾಗ ಒಣ ಮಣ್ಣು ಹಾಕುವ ಕೆಲಸ ತಪ್ಪುತ್ತದೆ. ಗುಂಡಿಯ ವ್ಯಾಸ 25 -40 ಸೆಂಮೀ. ಮತ್ತು ಆಳ 3-5 ಮೀ. ನೆಲದೊಳಗಿನ ನೀರಿನ ತಾಣ ಗುಂಡಿಯ ತಳಕ್ಕಿಂತ ಕೆಳಗಿರಬೇಕು. ಮೇಲ್ಗಡೆಯ ಕೆಲವು ಆಳದಷ್ಟು ಭಾಗವನ್ನು ಕಲ್ಲಿನ ಕಟ್ಟಡದಿಂದ ಭದ್ರಗೊಳಿಸಬೇಕು. ಗುಂಡಿಯ ಮೇಲ್ಭಾಗವನ್ನು ಕಡಪ ಕಲ್ಲು ಅಥವಾ ಕಾಂಕ್ರೀಟ್ ಹಲಗೆಯಿಂದ ಮುಚ್ಚಬೇಕು. ಮರದ ಹಲಗೆಯನ್ನೋ ಬಿದಿರು ತಟ್ಟಿಗಳನ್ನೋ ಬಳಸುವುದು ಉಂಟು. ಉಪಯೋಗಕ್ಕಾಗಿ ಇದರ ಮಧ್ಯದಲ್ಲಿ ಒಂದು ರಂಧ್ರವನ್ನು ಬಿಡಬೇಕು. ಉಪಯೋಗಿಸಿದ ಮೇಲೆ ಮರದ ಹಲಗೆಯಿಂದ ರಂಧ್ರವನ್ನು ಮುಚ್ಚಬೇಕು. ಸೌಕರ್ಯಕ್ಕೋಸ್ಕರ ಒಂದು ಕೋಣೆಯನ್ನು ಕಟ್ಟಿಸಬಹುದು. ಇಂಥ ಗುಂಡಿಯಲ್ಲಿ ಕೆಲವು ಸಮಯದಲ್ಲಿಯೇ ರಾಸಾಯನಿಕ ಕ್ರಿಯೆಯಿಂದ ಉದ್ಭವಿಸುವ ಅನಿಲಗಳು ಸುತ್ತಲಿನ ವಾತಾವರಣದಲ್ಲಿ ದುರ್ವಾಸನೆಯನ್ನು ಪಸರಿಸುತ್ತವೆ. ಎಣ್ಣೆಯಲ್ಲಿ ಅದ್ದಿ ತೆಗೆದ ಚಿಂದಿಗೆ ಬೆಂಕಿ ತಾಗಿಸಿ ಗುಂಡಿಯೊಳಕ್ಕೆ ಎಸೆದರೆ ಅಲ್ಲಿ ಸಾಕಷ್ಟು ಹೊಗೆ ಮುಸುಕಿ ದುರ್ವಾಸನೆಯನ್ನು ನಿವಾರಿಸುತ್ತವೆ. ಡಿಡಿಟಿ ಪುಡಿಯನ್ನು ಕೂಡ ಗುಂಡಿಯ ಒಳಕ್ಕೆ ಸಿಂಪಡಿಸಬಹುದು. 

ಚಿಕ್ಕ ತೊಟ್ಟಿಯ ಕಕ್ಕಸು : ಕುಳಿತುಕೊಳ್ಳುವ ಸ್ಥಳ ಎತ್ತರದಲ್ಲಿ ಇರುತ್ತದೆ. ಅದರ ಕೆಳಗೆ ಒಂದು ಚಿಕ್ಕ ಮರದ ಅಥವಾ ಟಿನ್ನಿನ ತೊಟ್ಟಿಯನ್ನು ಇಡಲಾಗುವುದು. ಈ ಸ್ಥಳದ ಹಿಂಭಾಗದಲ್ಲಿ ಒಂದು ಸಣ್ಣ ಬಾಗಿಲು ಇರುವುದು. ಈ ಬಾಗಿಲಿನಿಂದ ದಿವಸಕ್ಕೆ ಒಂದು ಸಲ ತೊಟ್ಟಿಯನ್ನು ಹೊರತೆಗೆದು ಶುಚಿ ಮಾಡಬೇಕು. ಮಲ ತುಂಬಿದ ತೊಟ್ಟಿಗಳನ್ನು ತಲೆಯ ಮೇಲೆ ಹೊತ್ತು ಸಾಗಿಸುವ ಪದ್ಧತಿಯನ್ನು 1973ರ ಆಗಸ್ಟ್ 15ರಿಂದ ಮುಂದಕ್ಕೆ ಕರ್ನಾಟಕದಲ್ಲಿ ನಿಷೇಧಿಸಲಾಗಿದೆ. ಗುಂಡಿ ಕಕ್ಕಸುಗಳೋ ಸೆಪ್ಟಿಕ್ ಕಕ್ಕಸುಗಳೋ ಈಗ ರಾಜ್ಯಾದ್ಯಂತ ಗ್ರಾಮಾದ್ಯಂತ ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವತ್ರಿಕವಾಗಿ ಬಳಕೆಗೆ ಬರುತ್ತಿವೆ.

ಸೆಪ್ಟಿಕ್ ಬಾವಿ ಕಕ್ಕಸು: ಕಕ್ಕಸು ತೊಟ್ಟಿಯಿಂದ ಸಾಕಷ್ಟು ದೂರದ ತಗ್ಗಿನಲ್ಲಿ ಒಂದು ಬಾವಿಯನ್ನು ತಯಾರಿಸಬೇಕು. ಇದರ ಒಳಭಾಗವನ್ನು ಬರೀ ಕಲ್ಲಿನಿಂದ ಕಟ್ಟಬೇಕು. ಮೆಲುಭಾಗವನ್ನು ಕಾಂಕ್ರೀಟಿನ ಹಲಗೆಯಿಂದ ಭದ್ರವಾಗಿ ಮುಚ್ಚಬೇಕು. ಇದೇ ಸೆಪ್ಟಿಕ್ ಬಾವಿ. ತೊಟ್ಟಿಯ ತಳದಿಂದ ಈ ಬಾವಿಗೆ ಕೊಳವೆ ಜೋಡಣೆ ಉಂಟು. ಮಲವಿಸರ್ಜನೆ ಆದ ಬಳಿಕ ತೊಟ್ಟಿಗೆ ನೀರು ಸುರಿದರೆ ನೀರು ಭೂಮಿಗೆ ಹಿಂಗಿಹೋಗುತ್ತದೆ. ಮಲಮೂತ್ರ ಉಳಿದುಕೊಂಡಿರುತ್ತದೆ. ಬಾವಿಯ ಗಾತ್ರ ಹಾಗೂ ಮಣ್ಣಿನ ಗುಣವನ್ನು ಅನುಸರಿಸಿ ಹಲವಾರು ವರ್ಷಗಳಿಗೊಮ್ಮೆ ಈ ಬಾವಿಯನ್ನು ಖಾಲಿಮಾಡಿದರೆ ಸಾಕು. ಒಳಚರಂಡಿ ವ್ಯವಸ್ಥೆ ಇಲ್ಲದ ಎಲ್ಲ ಪ್ರದೇಶಗಳಲ್ಲೂ ಸೆಪ್ಟಿಕ್ ಬಾವಿ ಕಕ್ಕಸೇ ಇಂದು ಹೆಚ್ಚು ಜನಪ್ರಿಯವಾಗಿದೆ.

ಆಹಾರ : ದೇಶದ ಆಹಾರದ ಹೆಚ್ಚಿನ ಉತ್ಪಾದನೆ ಗ್ರಾಮಾಂತರ ಪ್ರದೇಶಗಳಲ್ಲಿ ಆಗುವುದಾದರೂ ಈ ಪದಾರ್ಥಗಳ ವೈe್ಞÁನಿಕ ಸಂಗ್ರಹ, ಶೇಖರಣೆ ಹಾಗೂ ಉಪಯೋಗ ತೀರ ಅವೈe್ಞÁನಿಕವಾಗಿಯೇ ಇಂದಿಗೂ ಗ್ರಾಮಗಳಲ್ಲಿ ನಡೆಯುತ್ತಿದೆ. ಇದರಿಂದ ಆಹಾರ ಪದಾರ್ಥಗಳ ನಿವಾರಣೀಯ ನಷ್ಟ ಒಂದು ಕಡೆ, ಗ್ರಾಮನೈರ್ಮಲ್ಯದ ಮೇಲೆ ಆಗುವ ದುಷ್ಪರಿಣಾಮ ಇನ್ನೊಂದು ಕಡೆ - ಹೀಗೆ ದ್ವಿವಿಧ ತೊಂದರೆಗಳಿವೆ. ಸುಧಾರಿತ ಪತ್ತಾಯಗಳು, ಸಹಕಾರೀ ದವಸ ಬ್ಯಾಂಕುಗಳು, ಮಾರುಕಟ್ಟೆಗಳು, ಶುಚಿಯಾದ ವ್ಯವಸ್ಥೆಗೊಳಿಸಿದ ಅಂಗಡಿಗಳಲ್ಲಿ ಮಾರಾಟದ ಏರ್ಪಾಡುಗಳು, ಅನುಪಯುಕ್ತ ವಸ್ತುಗಳ ಸಮರ್ಪಕ ವಿಲೆವಾರಿ ಇವೆಲ್ಲವೂ ಕ್ರಮಬದ್ಧವಾಗಿ ನಡೆಯಬೇಕಾದದ್ದು ತೀರ ಅವಶ್ಯ.
ವಾಯು : ಕಾರ್ಖಾನೆಗಳೂ ಸ್ವಯಂಚಾಲಿತ ವಾಹನಗಳೂ ಗ್ರಾಮಗಳನ್ನು ಆಕ್ರಮಿಸದಿರುವುದರಿಂದ ವಾಯುವಿನ ಮಲಿನತೆಯ ಸಮಸ್ಯೆ ಅಲ್ಲಿ ಇರುವುದಿಲ್ಲ. ಆದರೆ ಹೊಲಸು ನೀರು, ಕೊಳವೆ ಗುಂಡಿಗಳು, ಸರಿಯಾಗಿ ವಿಲೇವಾರಿಯಾಗದ ವಿಸರ್ಜಿತ ವಸ್ತುಗಳು ಇವೇ ಮುಂತಾದವು ಗ್ರಾಮದ ವಾತಾವರಣವನ್ನು ಸಾಕಷ್ಟು ಕಲುಷಿತಗೊಳಿಸಿ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಲ್ಲವು. ಅಲ್ಲದೇ ಮನೆ ಗುಡಿಸಲುಗಳನ್ನು ಕಟ್ಟಿಕೊಳ್ಳುವಲ್ಲಿ ವಾಯುಸಂಚಾರಕ್ಕೆ ತಕ್ಕ ಏರ್ಪಾಡನ್ನು ಬಹುತೇಕವಾಗಿ ಅe್ಞÁನದಿಂದ ಮಾಡದೇ ಶುದ್ಧವಾಯು, ಅದರ ಬಾಹುಳ್ಯದ ಮಧ್ಯದಲ್ಲಿಯೂ, ಗ್ರಾಮಸ್ಥರಿಗೆ ದೊರೆಯದೇ ಇರುಬಹುದು. ದುಬಾರಿ ಖರ್ಚಿಲ್ಲದೇ ಆದರೆ ವೈಜ್ಞಾನಿಕವಾಗಿ ತುಂಬ ಉಪಯುಕ್ತವಾದ ಮನೆಗಳನ್ನು ಕಟ್ಟಿಕೊಳ್ಳುವ ದಿಶೆಯಲ್ಲಿ ಗ್ರಾಮಸ್ಥರಿಗೆ ನೆರವು ನೀಡುವುದುಕೂಡ ಗ್ರಾಮ ನೈರ್ಮಲ್ಯ ಶಿಲ್ಪದ ಹೊಣೆ.										(ಕೆ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ